ಕುಂದಿಲಿ

  ಮೊಲವನ್ನು (ಹೇರ್) ಹೋಲುವ ಒಂದು ಬಿಲವಾಸಿ ಸಸ್ತನಿ (ರ್ಯಾಬಿಟ್). ಲ್ಯಾಗೊಮಾರ್ಫ ಗಣದ ಲೆಪೋರಿಡೀ ಕುಟುಂಬಕ್ಕೆ ಸೇರಿದೆ. ಸಾಮಾನ್ಯವಾಗಿ ಇದನ್ನೂ ಮೊಲವೆಂದೇ ನಿರ್ದೇಶಿಸುವುದುಂಟಾದರೂ ಇದಕ್ಕೂ ಮೊಲಕ್ಕೂ ಹಲವಾರು ವ್ಯತ್ಯಾಸಗಳಿವೆ. ಕುಂದಿಲಿ ಗಾತ್ರದಲ್ಲಿ ಮೊಲಕ್ಕಿಂತ ಚಿಕ್ಕದು; ಬಿಲಗಳಲ್ಲಿ ವಾಸಿಸುತ್ತದೆ; ಅದೇ ತಾನೇ ಜನಿಸಿದ ಮರಿಗಳ ಮೈಮೇಲೆ ಕೂದಲಿರುವುದಿಲ್ಲ; ಕಣ್ಣುಗಳು ತೆರೆದಿರುವುದಿಲ್ಲ. ಮರಿಗಳು ಬಹಳ ಅಸಹಾಯ ಸ್ಥಿತಿಯಲ್ಲಿರುತ್ತವೆ. ಮೊಲ ದೊಡ್ಡ ಗಾತ್ರದ್ದು; ಪೊದೆಗಳಲ್ಲಿ ಅಡಗಿಕೊಂಡಿರುವುದಾದರೂ ಸಾಮಾನ್ಯವಾಗಿ ಇದರವಾಸ ಮೈದಾನಗಳಲ್ಲಿ. ಮರಿಗಳು ಹುಟ್ಟಿದಾಗ ಅವಕ್ಕೆ ಮೈತುಂಬ ಕೂದಲುಂಟು. ಕಣ್ಣು ತೆರೆದಿರುತ್ತವೆ. ಹುಟ್ಟಿದ ಕೆಲವೇ ಮಿನಿಟುಗಳಲ್ಲಿ ಓಡಾಡುವಷ್ಟು, ಆಹಾರಾನ್ವೇಷಣೆಯಲ್ಲಿ ತೊಡಗುವಷ್ಟು ಶಕ್ತಿಯುತವಾಗಿರುತ್ತವೆ.

 ಯೂರೋಪ್ ಮತ್ತು ಏಷ್ಯದಲ್ಲಿ ಆರಿಕ್ಟಲ್ಯಾಗಸ್ ಕ್ಯುನಿಕ್ಯುಲಸ್ ಎಂಬ ಪ್ರಭೇದಕ್ಕೂ ಉತ್ತರ ಅಮೆರಿಕದ ಸಿಲ್ವಿಲ್ಯಾಗಸ್ ಜಾತಿಗೆ ಸೇರಿದ ಪ್ಯಾಲುಸ್ಟ್ರಸ್, ಏಕ್ವಾಟಿಕಸ್, ಫ್ಲಾರಿಡೇನಸ್, ನುಟಾಲಿಯೈ ಮತ್ತು ಆಡುಬಾನಿಯೈ ಪ್ರಭೇದಗಳಿಗೂ ಕುಂದಿಲಿಗಳೆಂದು ಹೆಸರಿದೆ. ಆರಿಕ್ಟಲ್ಯಾಗಸ್ ಕ್ಯುನಿಕ್ಯುಲಸ್ ಪ್ರಭೇಧವನ್ನು ಹಲವು ಶತಮಾನಗಳಿಂದ ಸಾಕುಪ್ರಾಣಿಯಾಗಿಯೂ ಬೆಳೆಸಲಾಗಿದೆ. ಸ್ವಾಭಾವಿಕವಾಗಿ ಸಿಕ್ಕುವ ಕುಂದಿಲಿ ಪೊದೆಗಳಲ್ಲಿ, ಬೇಲಿಯ ಸಾಲುಗಳಲ್ಲಿ, ನೆಲದಲ್ಲಿ ಪೊಟರೆಗಳನ್ನು ಮಾಡಿಕೊಂಡು ವಾಸಿಸುತ್ತದೆ. ಸಂಘಜೀವಿಯಾದ ಇದು ಸಣ್ಣ ಸಣ್ಣ ಗುಂಪುಗಳಲ್ಲಿರುವುದೇ ವಾಡಿಕೆ. ಬಲು ಸೌಮ್ಯವಾದ ಮತ್ತು ಪುಕ್ಕಲು ಸ್ವಭಾವಾದ ನಿಶಾಚರ ಪ್ರಾಣಿಯದು. ಎಳೆ ಚಿಗುರು, ಬೇರು, ಗೆಡ್ಡೆಗೆಣಸು, ತೊಗಟೆ, ಕಾಯಿಗಳು ಇದರ ಪ್ರಧಾನ ಆಹಾರ.

 ಬೂದು ಅಥವಾ ಬಿಳಿಯ ಬಣ್ಣದ ದೇಹ, ಒತ್ತಾದ ಮತ್ತು ನಯವಾದ ತುಪ್ಪುಳು, ಸೀಳಿದ ಮೇಲ್ದುಟಿ, ಮುಂಗಾಲಿಗಿಂತ ಉದ್ದವಾದ ಹಿಂಗಾಲುಗಳು ಮೂಗಿನ ಹೊಳ್ಳೆಯ ತುದಿಯಲ್ಲಿದ್ದು ಕೂದಲಿನಿಂದ ಆವೃತವಾಗಿರುವ ಸಂವೇದನಾ ಗ್ರಾಹಿ ಮೆತ್ತೆಗಳು, ಅಂಗಾಲುಗಳಲ್ಲಿರುವ ರೋಮಾವೃತ ಮೆತ್ತೆಗಳು, ಬಾಚಿ ಹಲ್ಲುಗಳು, ತಲೆಗಿಂತ ಬಲು ಉದ್ದವಾದ ಕಿವಿಗಳು, ಮೋಟು ಬಾಲ ಇವು ಕುಂದಿಲಿಯ ಪ್ರಮುಖ ಲಕ್ಷಣಗಳು ದೃಷ್ಟಿ ಮಂದವಾಗಿದ್ದರೂ ಇದರ ಶ್ರವಣೇಂದ್ರಿಯ ಹಾಗೂ ಘ್ರಾಣೇಂದ್ರಿಯಗಳು ಬಹಳ ಚುರುಕು. ಶತ್ರುವಿನ ಸುಳಿವನ್ನು ದೂರದಿಂದಲೇ ತಿಳಿದು ಕುಪ್ಪಳಿಸುತ್ತ ಓಡುತ್ತದೆ. ಆದರೆ ಓಡುವುದರಲ್ಲಿ ಮೊಲಗಳಷ್ಟು ಚುರುಕಲ್ಲ. ಬಹಳ ದೂರ ಒಂದೇ ಸಮನಾಗಿ ಓಡಲಾರದ ಇದು ಬಲುಬೇಗ ಶತ್ರುವಿನ ಕೈಗೆ ಸಿಕ್ಕಿ ಬೀಳುತ್ತದೆ. ಕೆಲವೊಮ್ಮೆ ಶತ್ರುವಿನ ಸುಳಿವು ತಿಳಿದಾಗ ಕಡೆದ ಪ್ರತಿಮೆಯಂತೆ ಒಂದು ಕಡೆ ನಿಶ್ಚಿಲವಾಗಿ ಕುಳಿತಿದ್ದು ಇದ್ದಕ್ಕಿದ್ದಂತೆಯೆ ನೆಗೆದು ಓಡಿಬಿಡುತ್ತದೆ. ಹೆದರಿದಾಗ ಹೆಪ್ಪುಗಟ್ಟಿ ಕೂತು ಬಿಡುವುದು ಇಂಥ ಅನೇಕ ಪ್ರಾಣಿಗಳ ಸಹಜ ವರಸೆಗಳಲ್ಲೊಂದು.

 ತನ್ನ ಸಂತಾನೋತ್ವತ್ತಿಯ ಸಾಮಥ್ರ್ಯಕ್ಕೆ ಹೆಸರಾದ ಇದು ಸೂಲಿಗೆ 4-7 ಮರಿಗಳಂತೆ ವರ್ಷಕ್ಕೆ 6-7 ಸೂಲು ಮರಿ ಹಾಕುತ್ತದೆ. ಗರ್ಭಧಾರಣೆಯ ಅವಧಿ ಸುಮಾರು 30 ದಿವಸಗಳು. ಮರಿ ಹಾಕುವ ಮುನ್ನ ಹೆಣ್ಣು ಕುಂದಿಲಿ ನೆಲದಲ್ಲಿ ಬಿಲ ತೋಡಿ ಕಡ್ಡಿ, ಹುಲ್ಲು ಮುಂತಾದವನ್ನು ಹರಡಿ ಗೂಡನ್ನು ನಿರ್ಮಿಸುತ್ತದೆ. ಮರಿಗಳ ಪಾಲನೆ ಹೆಣ್ಣಿಗೆ ಮಾತ್ರ ಸೇರಿದ್ದು. ಮರಿಗಳು ಸುಮಾರು 40 ವಾರಗಳಲ್ಲಿ ಪ್ರೌಢಾವಸ್ಥೆಗೆ ಬರುತ್ತವೆ.

 ಕುಂದಿಲಿಗಳನ್ನು ಮಾಂಸ, ತುಪ್ಪುಳುಗಳಿಗಾಗಿ ಬೇಟೆಯಾಡುವುದು, ಮುದ್ದಿಗಾಗಿ ಪಳಗಿಸಿ ಸಾಕುವುದು ಉಂಟು. (ನೋಡಿ- ಮೊಲ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ